ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಉದ್ಯೋಗ ಹುಡುಕಲು ಸೂಕ್ತವಾದ ಬ್ಲಾಗ್ ಪೋಸ್ಟ್ ಮೂಲಕ ನಿಮ್ಮ ಪ್ರೀತಿಯ ವಿಜಯನಗರ ಬಾಲ್ಕ್ ಇಂದು ಬಂದಿದೆ. ಉದ್ಯೋಗ ಹುಡುಕಾಟ ಕೆಲವರಿಗೆ ಸುಲಭ, ಇನ್ನು ಕೆಲವರಿಗೆ ಕಷ್ಟ. ಆದರೆ, ಈಗಿನ ಕೋವಿಡ್-೧೯ ಸಮಯದಲ್ಲಿ ಉದ್ಯೋಗ ಪಡೆಯುವುದು ತುಂಬಾ ಕಷ್ಟ ಎಂಬ ಪರಿಸ್ಥಿತಿ ಬಂದಿದೆ. ಅದನ್ನು ಕಲಿಯಿರಿ, ಇದನ್ನು ಕಲಿಯಿರಿ ಎಂದು ನಿಮಗೆ ಸಾಕಷ್ಟು ಮಾರ್ಗದರ್ಶನ ದೊರಕಿರಬಹುದು. ಆದರೆ, ಉದ್ಯೋಗ ಹುಡುಕೋದು ಹೇಗೆ ಎಂಬ ಮಾರ್ಗದರ್ಶನ ದೊರಕುವುದು ಕಡಿಮೆ. ಶಿಕ್ಷಣ ಪಡೆದು ಉದ್ಯೋಗ ದೊರಕದೆ ಇರುವಾಗ ಉದ್ಯೋಗ ಹುಡುಕಾಟದ ಕಷ್ಟ ಬಹುತೇಕ ವಿದ್ಯಾರ್ಥಿಗಳಿಗೆ ಅನುಭವಾಗುತ್ತದೆ.
ಎಲ್ಲಿದೆ ಜಾಬ್ಸ್? ಹುಡುಕಾಡಿ
ಈಗ ಮನೆಯಲ್ಲಿ ಕುಳಿತು ಮೊಬೈಲ್ ಫೋನ್ ಮೂಲಕ ಎಲ್ಲೆಲ್ಲಿ ಕೆಲಸ ಇದೆ ಎಂದು ಹುಡುಕಬಹುದು. ಅಂತರ್ಜಾಲದಲ್ಲಿ ಕೆಲಸ ಹುಡುಕಲು ಹಲವು ತಾಣಗಳು ಇವೆ. ನೀವು ಓದಿದ ವಿಷಯಕ್ಕೆ ತಕ್ಕಂತೆ ದೊರಕುವ ಉದ್ಯೋಗಗಳ ಪಟ್ಟಿಯನ್ನು ನೀಡುವ ವೆಬ್ಸೈಟ್ನಲ್ಲಿ ಕೆಲಸ ಹುಡುಕುವುದು ಸೂಕ್ತ. ಲಿಂಕ್ಡ್ಇನ್ನಲ್ಲಿ ಪ್ರೊಫೈಲ್ ಅಪ್ಡೇಟ್ ಮಾಡಿದ್ದರೆ ಅಲ್ಲಿ ನಿಮ್ಮ ವಿದ್ಯಾರ್ಹತೆ ತಕ್ಕುದಾದ ಕೆಲಸಗಳು ಮಾತ್ರ ಕಾಣಿಸುತ್ತವೆ. ಇಂತಹ ವೆಬ್ಸೈಟ್ಗಳಲ್ಲಿ ಯಾವುದಾದರೂ ನಿಮಗೆ ಸೂಕ್ತವೆನಿಸುವ ಕೆಲಸಕ್ಕೆ ಸಂಬಂಧಿಸಿದಂತೆ ಸಂಪರ್ಕ ಸಂಖ್ಯೆ ಅಥವಾ ಇಮೇಲ್ ದೊರಕಿದರೆ ಕೆಲಸ ಖಾಲಿಯಿದೆಯೇ ಎಂದು ಯಾವುದೇ ಮುಜುಗರ ಇಲ್ಲದೆ ಕೇಳಿರಿ. ಇಂತಹ ಇಂಡಸ್ಟ್ರಿ ಕಾಂಟ್ಯಾಕ್ಟ್ ನಂಬರ್ಗೆ ಕರೆ ಮಾಡಿ ಕೆಲಸ ಖಾಲಿಯಿದೆಯೇ ಕೇಳಿ.
ಯಾವ ಕೆಲಸ? ಆಲೋಚಿಸಿ
ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕೆಂದು ಆಲೋಚಿಸುವುದು ಅತ್ಯಂತ ಮಹತ್ವಪೂರ್ಣ ಸಂಗತಿಯಾಗಿದೆ. ಸಿಕ್ಕಿದ್ದೇ ಸೀರುಂಡೆ ಎಂದು ಯಾವುದಕ್ಕೆ ಬೇಕಾದರೂ, ಎಲ್ಲದಕ್ಕೂ ಅರ್ಜಿ ಸಲ್ಲಿಸುವುದು ತರವಲ್ಲ. ನೀವು ನಿಮಗಿಷ್ಟವಿಲ್ಲದ ಫೀಲ್ಡ್ಗೆ ಅರ್ಜಿ ಸಲ್ಲಿಸಿದರೆ, ಅಲ್ಲಿ ಕೆಲಸ ಸಿಕ್ಕರೆ ಮತ್ತೆ ಆ ಕೆಲಸದಿಂದ ಬೇರೆ ಕ್ಷೇತ್ರಕ್ಕೆ ಹೋಗುವುದು ಕಷ್ಟವಾಗಬಹುದು. ಯಾವುದಾರೂ ಕಂಪನಿಯಲ್ಲಿ ನಿಮಗೆ ಉತ್ತಮವಾದ ಆಫರ್ ಸಿಕ್ಕರೆ ಆ ಕಂಪನಿಯ ಬಗ್ಗೆ ಅಧ್ಯಯನ ಮಾಡಿ ಅರ್ಜಿ ಸಲ್ಲಿಸಿ. ನೀವು ಬದುಕನ್ನು ಎಂಜಾಯ್ ಮಾಡಬಹುದಾದ ಉದ್ಯೋಗವನ್ನು ಆಯ್ಕೆ ಮಾಡಲು ಆದ್ಯತೆ ನೀಡಿ. ವಿಜಯನಗರ ಬಾಲ್ಕ್ನಲ್ಲಿ ನಿಮಗೆ ಉದ್ಯೋಗ ಮತ್ತು ಕೈತುಂಬಾ ವೇತನ ದೊರಕಲು ಪೂರಕವಾದ ವಿವಿಧ ಕೋರ್ಸ್ಗಳಿವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ಅವಸರದಲ್ಲಿ ರೆಸ್ಯೂಂ ರಚಿಸಬೇಡಿ
ರೆಸ್ಯೂಂ ರಚನೆಗೆ ಸಂಬಂಧಪಟ್ಟಂತೆ ವಿಕೆ ಮಿನಿಯ ನಿನ್ನೆಯ ಸಂಚಿಕೆಯಲ್ಲಿ ವಿವರವಾಗಿ ಟಿಪ್ಸ್ ನೀಡಲಾಗಿತ್ತು. ಪ್ರತಿಯೊಂದು ಉದ್ಯೋಗಕ್ಕೂ ಪ್ರತ್ಯೇಕವಾಗಿ ರಚಿಸಿದ ರೆಸ್ಯೂಂ ಕಳುಹಿಸಿಕೊಡುವುದು ಒಳ್ಳೆಯದು. ಒಂದೇ ರೆಸ್ಯೂಂ ಅನ್ನು ಹಲವು ಕಂಪನಿಗಳಿಗೆ ಫಾರ್ವಾಡ್ ಮಾಡಿ ಅದೃಷ್ಟ ಪರೀಕ್ಷಿಸಬೇಡಿ. ನಿಮ್ಮ ರೆಸ್ಯೂಂ ಅಥವಾ ಸಿವಿ ರಚನೆಗೆ ಸಮಯ ವಿನಿಯೋಗಿಸುವುದು ಅತ್ಯಂತ ಅಗತ್ಯವಾಗಿದೆ. ಕಾಟಾಚಾರಕ್ಕೆ ಅಥವಾ ಯಾರದ್ದೋ ರೆಸ್ಯೂಂ ಕಾಪಿ ಮಾಡಿ ಕಳುಹಿಸುವುದು ಉತ್ತಮವಲ್ಲ. ನಿಮ್ಮ ಸ್ವಂತ ಸಿವಿಯಿಂದ ಕೆಲಸ ಸಿಗುವ ಚಾನ್ಸ್ ಅಧಿಕವಾಗಿರುತ್ತದೆ.
ಸಾಕ್ಷಿ ಇರಲಿ
ನಿಮ್ಮಲ್ಲಿರುವ ಅನನ್ಯವಾದ ಕೌಶಲಗಳ ಬಗ್ಗೆ ಕಂಪನಿಗೆ ಮಾಹಿತಿ ನೀಡುವುದು ಅತ್ಯಂತ ಒಳ್ಳೆಯ ಸಂಗತಿ. ಆದರೆ, ನೀವು ಹೇಳುವ ಕೌಶಲಕ್ಕೆ ಬೆಂಬಲ ನೀಡುವ ಸಾಕ್ಷಿಗಳೂ ನಿಮ್ಮಲ್ಲಿ ಇರಬೇಕಾಗುತ್ತದೆ. ಈ ರೀತಿ ಇದ್ದರೆ ಮಾತ್ರ ನಿಮಗೆ ಕೆಲಸ ಸಿಗುವ ಚಾನ್ಸ್ ಅಧಿಕವಾಗಿರುತ್ತದೆ. ಆದರೆ, ಟೀಮ್ ವರ್ಕ್, ನಾಯಕತ್ವ ಇತ್ಯಾದಿಗಳಿಗೆ ಸಾಕ್ಷಿ ನೀಡುವುದು ಕಷ್ಟವಾಗಬಹುದು. ಆದರೆ, ಸಂದರ್ಶನದ ಸಮಯದಲ್ಲಿ ನಿಮ್ಮ ಹಾವಭಾವ ನೋಡಿದ ತಕ್ಷಣ ಇಂತಹ ಸ್ಕಿಲ್ ನಿಮ್ಮಲ್ಲ ಇದೆಯೇ ಇಲ್ಲವೇ ಎಂದು ಕಂಪನಿ ತಿಳಿದುಕೊಳ್ಳಬಹುದು. ಹೀಗಾಗಿ ಹೇಳುವ ಕೌಶಲಕ್ಕೆ ತಕ್ಕಂತೆ ಸಾಕ್ಷಿ ನಿಮ್ಮಲ್ಲಿರಲಿ. ವಿವಿಧ ಸ್ಕಿಲ್ಗಳನ್ನು ಕಲಿಯಲು ಆಸಕ್ತಿಯಿದ್ದರೆ, ನಮ್ಮನ್ನು ಸಂಪರ್ಕಿಸಲು ಕ್ಲಿಕ್ ಮಾಡಿ.
ಸಂದರ್ಶನಕ್ಕೆ ತಯಾರಿ
ನೀವು ಸಲ್ಲಿಸಿದ ಅರ್ಜಿಯು ಕಂಪನಿಯ ಎಚ್ಆರ್ಗೆ ಇಷ್ಟವಾಗಿ ಸಂದರ್ಶನಕ್ಕೆ ಕರೆದುಬಿಡಬಹುದು. ಇಂತಹ ಸಂದರ್ಶನ ಎದುರಿಸಲು ಸಿದ್ಧತೆ ನಡೆಸಲು ಮರೆಯಬೇಡಿ. ಇದಕ್ಕಾಗಿ ಇಂಟರ್ನೆಟ್ನಲ್ಲಿ ಸಂದರ್ಶನದ ಪ್ರಶ್ನೋತ್ತರಗಳನ್ನು ಹುಡುಕಿ. ಉದಾಹರಣೆಗೆ ನೀವು ಇನ್ಫೋಸಿಸ್ ಸಂದರ್ಶನ ಎದುರಿಸಬೇಕಿದ್ದರೆ ಗೂಗಲ್ಗೆ ಹೋಗಿ `ಇಂಟರ್ವ್ಯೂ ಕೊಶ್ಚನ್ಸ್ ಫಾರ್ ಇನ್ಫೋಸಿಸ್’ ಎಂದು ಹುಡುಕಿ. ಕೆಲವೊಂದು ವೆಬ್ಸೈಟ್ನಲ್ಲಿ ಅಣಕು ಸಂದರ್ಶನಗಳು ಇರುತ್ತವೆ. ಇಲ್ಲಿ ಲಭ್ಯವಿರುವ ಪ್ರಶ್ನೆಗಳನ್ನು ನಿಮ್ಮ ಸಂದರ್ಶನದಲ್ಲಿ ಕೇಳುವರೆಂದು ಹೇಳಲಾಗದು. ಆದರೆ, ಯಾವ ರೀತಿ ಪ್ರಶ್ನೆಗಳಿಗೆ ಉತ್ತರಿಸಬೇಕು? ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು? ಸಂದರ್ಶನದಲ್ಲಿ ಹೇಗಿರಬೇಕು? ಇತ್ಯಾದಿಗಳನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಮನೆಯಲ್ಲಿ ನೀವು ಅಣ್ಣ/ಅಕ್ಕ, ತಮ್ಮ/ತಂಗಿ ಜೊತೆ ಸಂದರ್ಶನದ ಆಟ ಆಡಬಹುದು. ಇದರಿಂದ ನೀವು ಆತ್ಮವಿಶ್ವಾಸವನ್ನೂ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
ಯಶಸ್ಸಿನ ಉಡುಗೆ
ಸಂದರ್ಶನಕ್ಕೆ ಹೋದಾಗ ನೀವು ಧರಿಸಿದ ಉಡುಗೆ ತೊಡುಗೆ ನಿಮಗೆ ಕೆಲಸ ಸಿಗಲು ಅಥವಾ ಸಿಗದಿರಲಿ ಕಾರಣವಾಗಬಹುದು. ನೀವು ಅರ್ಜಿ ಸಲ್ಲಿಸಿದ ಕಂಪನಿಯ ಕೆಲಸದ ವಾತಾವರಣ ಹೇಗಿರುತ್ತದೆ ಎಂದು ತಿಳಿದುಕೊಂಡು ಉಡುಗೆ ಧರಿಸಿದರೆ ಒಳ್ಳೆಯದು. ಕ್ಯಾಶುವಲ್ ಉಡುಗೆ ಬಯಸುವ ಕಂಪನಿಗೆ ನೀವು ಟೀಶರ್ಟ್ ಧರಿಸಿ ಸಂದರ್ಶನಕ್ಕೆ ಹಾಜರಾದರೆ ಚೆನ್ನಾಗಿರುವುದಿಲ್ಲ. ಒಂದು ತಿಂಗಳಿನಿಂದ ವಾಷ್ ಮಾಡದೆ ಇರುವ ಟೀಶರ್ಟ್ ಅಥವಾ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಬೇಡಿ. ತುಂಬಾ ಗಾಢ ಬಣ್ಣದ ಉಡುಗೆತೊಡುಗೆಯೂ ಬೇಡ. ಸರಳ ಸುಂದರ ಉಡುಗೆ ಧರಿಸಿ ಸಂದರ್ಶನಕ್ಕೆ ಹಾಜರಾಗಿರಿ.