ವಿಜಯನಗರ ಬಾಲ್ಕ್ ಬ್ಲಾಗ್ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಉದ್ಯೊಗದಲ್ಲಿರುವವರಿಗೆ ತಮ್ಮ ಕರಿಯರ್ ರೂಪಿಸಿಕೊಳ್ಳಲು, ಕರಿಯರ್ನಲ್ಲಿ ಇನ್ನಷ್ಟು ಉನ್ನತಮಟ್ಟಕ್ಕೆ ಬೆಳೆಯಲು ಬೇಕಾದ ಸಾಕಷ್ಟು ಟಿಪ್ಸ್ಗಳನ್ನು ನೀಡಲಾಗುತ್ತಿದೆ. ಈ ದಿನ ನಾವು ಕರಿಯರ್ನಲ್ಲಿ ಅತ್ಯಂತ ಅಗತ್ಯವಾದ ಕೌಶಲವೊಂದರ ಬಗ್ಗೆ ತಿಳಿದುಕೊಳ್ಳೋಣ.
ಆ ಕೌಶಲದ ಹೆಸರು ಸಾಫ್ಟ್ಸ್ಕಿಲ್ಸ್!
ನೀವು ಕಾಲೇಜಿನಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿರಬಹುದು. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರಬಹುದು. ಸಾಕಷ್ಟು ಸರ್ಟಿಫಿಕೇಟ್ಗಳು ನಿಮ್ಮಲ್ಲಿರಬಹುದು. ಆದರೆ, ಉದ್ಯೋಗ ಸಂದರ್ಶಕರಿಗೆ ನಿಮ್ಮನ್ನು ನೋಡಿದಾಗ ಹಾಗೆ ಅನಿಸದೆ ಇರಬಹುದು.
ನೀವು ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನ ಹೊಂದಿರಬಹುದು. ಆದರೆ, ಪ್ರಸಂಟೇಷನ್ ಮಾಡುವ ಕಲೆ ಗೊತ್ತಿಲ್ಲದೆ ಇರಬಹುದು.
ನೀವು ತಂಡದ ಲೀಡರ್ ಆಗಿರಬಹುದು. ಆದರೆ, ಸಹೋದ್ಯೋಗಿಗಳನ್ನು ಪ್ರೇರೇಪಿಸಲು ತಿಳಿಯದವರಾಗಿರಬಹುದು.
ನಿಮ್ಮಲ್ಲಿ ಸಾಕಷ್ಟು ಪದಸಂಪತ್ತು ಇರಬಹುದು. ಆದರೆ, ಸಂವಹನ ಕೌಶಲ ಇಲ್ಲದೆ ಇರಬಹುದು.
ಇಂದಿನ ಕಾರ್ಪೋರೆಟ್ ಜಗತ್ತಿಗೆ ಇವೆಲ್ಲ ಅತ್ಯಂತ ಅವಶ್ಯವಾದ ಕೌಶಲಗಳು. ಈಗ ಕೆಲವು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಹೇಳಿಕೊಡುವ ಪ್ರಯತ್ನ ಮಾಡುತ್ತಿವೆ. ಇಂತಹ ಕೌಶಲಗಳನ್ನು ಕಲಿಸಿ ಸರ್ಟಿಫಿಕೇಷನ್ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಇಂತಹ ತರಬೇತಿಯನ್ನು ಯಾರು, ಯಾವಾಗ ಬೇಕಾದರೂ ಪಡೆಯಬಹುದು. ಉದ್ಯೋಗ ಸಂದರ್ಶನದಲ್ಲಿ ಇಂತಹ ಸರ್ಟಿಫಿಕೇಷನ್ ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.
ಈ ಕೌಶಲದ ಬಗ್ಗೆ ನಿಮಗೆಷ್ಟು ಗೊತ್ತು?
ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ.
ಸಾಫ್ಟ್ ಸ್ಕಿಲ್ಗಳು ವೃತ್ತಿಪರ ಮತ್ತು ವ್ಯವಹಾರದ ಯಶಸ್ಸಿಗೆ ಅತ್ಯಂತ ಅವಶ್ಯಕ. ಇದಕ್ಕಾಗಿಯೇ ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುತ್ತವೆ. ಸಾಫ್ಟ್ ಸ್ಕಿಲ್ನಲ್ಲಿ ಪರಿಣತಿ ಹೊಂದಿರದ ವ್ಯಕ್ತಿಯಿಂದ ಕಂಪನಿಯ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬೀಳಬಹುದು.
ಎಲ್ಲಿ ಕಲಿಯಬಹುದು Soft skills?
ಸಾಫ್ಟ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಆಸುಪಾಸಿನಲ್ಲೇ ಇರಬಹುದು. ನೀವಿರುವ ಕಾಲೇಜಿಗೆ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಬಹುದು. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಟ್ಟುಕೊಂಡವರಿಂದ ದೂರವಿರುವುದು ಒಳ್ಳೆಯದು. ಆದರೆ, ಕೆಲವು ಸಂಸ್ಥೆಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡುವಲ್ಲಿ ಜನಪ್ರಿಯತೆ ಪಡೆದಿರುತ್ತವೆ. ಸಾಫ್ಟ್ ಸ್ಕಿಲ್ ಪಡೆಯಲು ಅಂತಹ ಸಂಸ್ಥೆಗಳನ್ನು ಅವಲಂಬಿಸಿಕೊಳ್ಳಬಹುದು.
ಈಗ ಇಂಟರ್ನೆಟ್ನಲ್ಲಿ, ಯೂಟ್ಯೂಬ್ನಲ್ಲಿಯೂ ಇಂತಹ ಸಾಫ್ಟ್ ಸ್ಕಿಲ್ಗಳ ಬಗ್ಗೆ ಟಿಪ್ಸ್ಗಳು ದೊರಕುತ್ತವೆ. ಇವುಗಳನ್ನು ಅನುಸರಿಸಿದರೂ ಸಾಕು. ಇಂತಹ ಕೌಶಲಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಮೊದಲಿಗೆ ನೀವು ಯಾವ ಉದ್ಯೋಗದಲ್ಲಿದ್ದೀರಿ/ ಯಾವ ಉದ್ಯೊಗ ಮಾಡಲು ಬಯಸಿದ್ದೀರಿ ಎಂದು ತಿಳಿದುಕೊಳ್ಳಿ.
ಆ ಉದ್ಯೊಗಕ್ಕೆ ಅವಶ್ಯವಿರುವ ಸಾಫ್ಟ್ ಸ್ಕಿಲ್ಗಳು ಯಾವುವು ಎಂದು ತಿಳಿದುಕೊಳ್ಳಿ. ಉದಾಹರಣೆಗೆ ಪ್ರಸಂಟೇಷನ್ ಸ್ಕಿಲ್, ಕಮ್ಯುನಿಕೇಷನ್ ಸ್ಕಿಲ್ ಇತ್ಯಾದಿ.
ನೀವು ಪಟ್ಟಿ ಮಾಡಿರುವ ವಿವಿಧ ಸ್ಕಿಲ್ಗಳನ್ನು ಒಂದೊಂದಾಗಿ ಕಲಿಯಲು ಆರಂಭಿಸಿ.
ಹೀಗೆ ಮಾಡುತ್ತ ಹೋದಂತೆ ನಿಮ್ಮಲ್ಲಿ ನಾಯಕತ್ವದ ಗುಣವೂ ಉತ್ತಮಗೊಳ್ಳುತ್ತದೆ.
ನಾಯಕತ್ವದ ಗುಣಗಳ ಕುರಿತು ಮುಂದಿನ ಪೋಸ್ಟ್ನಲ್ಲಿ ನಿಮಗೆ ಅಮೂಲ್ಯ ಟಿಪ್ಸ್ ನೀಡುತ್ತೇವೆ.
ಸ್ನೇಹಿತರೇ, ವಿಜಯ ನಗರ ಬಾಲ್ಕ್ ವೆಬ್ಸೈಟ್ಗೆ ನಿಯಮಿತವಾಗಿ ಭೇಟಿ ನೀಡುತ್ತ ಇರಿ. ನಿಮ್ಮ ಸ್ನೇಹಿತರಿಗೂ ಇಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಕಳುಹಿಸಲು ಅಥವಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಮರೆಯಬೇಡಿ. ಗುಡ್ಲಕ್.
ವಿಜಯನಗರ ಬಾಲ್ಕ್ನಲ್ಲಿ ಲಭ್ಯವಿರುವ ಕೋರ್ಸ್ಗಳ ಮಾಹಿತಿ ಪಡೆಯಲು ಈ ವೆಬ್ಸೈಟ್ನಲ್ಲಿ ನೀಡಲಾದ ವಾಟ್ಸಪ್ ಬಟನ್ ಅನ್ನು ಕ್ಲಿಕ್ ಮಾಡಿ ಸಂಪರ್ಕಿಸಬಹುದು.